ಶಬರಿ ಕೊಳ್ಳ ಸುರೇಬಾನ – ಶ್ರೀ ರಾಮನಿಗಾಗಿ ಶಬರಿ ಕಾದ ಪುಣ್ಯ ಸ್ಥಳ

ಕರ್ನಾಟಕದ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನದ ಗ್ರಾಮದೇವತೆಯಾದಂತಹ, ಶಬರಿ ದೇವಿಯು ಗ್ರಾಮದಿಂದ ನಾಲ್ಕು ಕಿಲೋಮೀಟರು ದೂರದಲ್ಲಿ, ಬೆಟ್ಟ ಗುಡ್ಡದ ನಡುವೆ ರಾರಾಜಿಸುತ್ತಿದ್ದಾಳೆ. ರಘುನಂದನಿಗಾಗಿ(ಶ್ರೀ ರಾಮ), ಶಬರಿಯು ನಿಷ್ಠೆಯಿಂದ, ಪ್ರೀತಿಯಿಂದ, ದಿನವೂ ಭಕ್ತಿಪರವಶವಾಗಿ ಕಾದ ಪುಣ್ಯ ಸ್ಥಳವಿದು. ಕಡೆಗೂ ಶ್ರೀ ರಾಮನ ಪಾದಾರವಿಂದ ಪಾವನವಾದ ಶಬರಿ ಕೊಳ್ಳ, ಒಂದು ಪವಿತ್ರ ಕ್ಷೇತ್ರ.

ಶಬರಿ ಕೊಳ್ಳದ ಹಿಂದಿನ ದಂತಕಥೆ

ಶಬರಿಯು ಒಬ್ಬ ಬೇಡನ ಮಗಳಾಗಿದ್ದಳು – “ನಿಷದ” ಎಂಬ ಬುಡಕಟ್ಟು ಜನಾಂಗದವಳು.  ಈಕೆಯ ಮದುವೆಯ ರಾತ್ರಿ, ಭೋಜನಕ್ಕಾಗಿ ಸಾವಿರಾರು ಪ್ರಾಣಿಗಳನ್ನು ಬಲಿಕೊಡಲು ತಂದಿದ್ದನ್ನು ನೋಡಿ ಅವಳ ಹೃದಯ ಕಲಕಿದಂತಾಗುತ್ತದೆ. ಆದಕಾರಣ, ತನ್ನ ಮದುವೆಯ ದಿನದಂದು, ನಸುಕಿನಲ್ಲಿ ತನ್ನ ಪ್ರಾಪಂಚಿಕ ಸುಖ-ಭೋಗಗಳನ್ನು ತೊರೆದು ಗುರುವನ್ನು ಹರಿಸುತ್ತಾ ಬಂದಾಗ ಅವಳಿಗೆ ಸಿಕ್ಕ ಗುರುಗಳೇ ಮಾತಂಗಮುನಿ.

ಶಬರಿ ಕೊಳ್ಳ ಸುರೇಬಾನ - Shabari Kolla sureban

 

ಮನೆಯನ್ನು ತೊರೆದ ನಂತರ, ಶಬರಿಯು, ಆದ್ಯಾತ್ಮಿಕ ದಾರಿಯನ್ನು ಕಂಡುಕೊಳ್ಳಲ್ಲು, ಒಬ್ಬ ಗುರುವಾಗಿ ಮಾರ್ಗದರ್ಶನ ನೀಡಿದವರೆ  ಋಷಿ ಮಾತಂಗ. ಅವರ ಮರಣದ ನಂತರ, ಈ ಶಾಂತಿ ಧಾಮಕ್ಕೆ ಬಂದು ರಾಮನಿಗಾಗಿ ಕಾಯುತ್ತಿರುತ್ತಾಳೆ. ಶಬರಿಯನ್ನು ಇಲ್ಲಿಯ ಜನರು “ಸೋರೆವ್ವ” ಎಂತಲೂ ಕರೆಯುತ್ತಾರೆ. ಶಾಂತಚಿತ್ತವಾದ, ಮನಸ್ಸಿಗೆ ಮುದನೀಡುವ, ಪ್ರಕೃತಿಯ ಮಡಿಲಲ್ಲಿ ಶಬರಿಯು ನೆಲೆಸಿದ್ದಾಳೆ.

ಶ್ರೀರಾಮ ಮತ್ತು ಶಬರಿಯ ಬಾಂಧವ್ಯ

ಶಬರಿಯು ಪ್ರತಿ ದಿನವೂ, ತರೇಹವಾರಿ ಹೂವುಗಳು ಹಾಗು ಹಣ್ಣುಗಳನ್ನು, ಅದರಲ್ಲೂ ವಿಶೇಷವಾಗಿ ಬೋರೆಹಣ್ಣನು, ಶ್ರೀರಾಮನಿಗಾಗಿ ಸಂಗ್ರಹಿಸುತ್ತಿದ್ದಳು. ಅವನಿಗಾಗಿ ಮಧುಪರ್ಕವನ್ನು(ಪಾನೀಯ) ಸಿದ್ಧಪಡಿಸುತ್ತಿದ್ದಳು. ಇಂದು ಬರುವನು ರಾಮ, ನಾಳೆ ಬರುವನು ರಾಮ, ಎಂದು ಎಡಬಿಡದೆ ಪ್ರತಿದಿನವೂ ರಾಮನಿಗಾಗಿ ದಾರಿ ಕಾಯುತ್ತಿದ್ದಳು. ಈಕೆಯು ರಾಮನಲ್ಲಿ ಇಟ್ಟಿರುವ ಭಕ್ತಿಗೆ ಸಾಟಿಯೇ ಇಲ್ಲ. ಅಂತಹ ಪರಮ ಭಕ್ತೆ ತಾಯಿ ಶಬರಿ.

ಶಬರಿ ಕೊಳ್ಳ ಸುರೇಬಾನ - Shabari Kolla sureban

ಅವಳು, ಶ್ರೀರಾಮನಿಗಾಗಿ ಬೋರೆಹಣ್ಣುಗಳನ್ನು ಆಯ್ದು ತಂದು, ಸವಿದು ನೋಡಿ, ಸಿಹಿಯಾಗಿದ್ದರೆ ಮಾತ್ರ ಶ್ರೀರಾಮನಿಗಾಗಿ, ಎಂದು ಪ್ರತಿದಿನವೂ ಆ ಬೋರೆಹಣ್ಣನು ಕಾಯ್ದಿಡುತ್ತಿದ್ದಳು. ಇಂದಿಗೂ, ಶಬರಿ ವನದಲ್ಲಿ ಬೋರೆಹಣ್ಣಿನ ಗಿಡ, ರಾಮ ಮತ್ತು ಶಬರಿಯ ಬಾಂಧವ್ಯಕ್ಕೆ ನಿದರ್ಶನವಾಗಿ ಸದಾ ಹಣ್ಣು ಬಿಡುತ್ತ ಸಾವಿರಾರು ವರ್ಷಗಳಿಂದ ತಲೆ ಎತ್ತಿ ನಿಂತಿದೆ.

ಶ್ರೀರಾಮನು, ಸೀತಾಮಾತೆಯನ್ನು ವನವಾಸದ ಸಂದರ್ಭದಲ್ಲಿ ಅರಸಿ ಸಂಚರಿತ್ತಿರುವಾಗ ಶಬರಿಯನ್ನು ಭೇಟಿಯಾಗುತ್ತಾನೆ. ಆ ಸಮಯದಲ್ಲಿ ಶಬರಿಯ ಭಕ್ತಿಯನ್ನು ಕಂಡು, ಮೂಕವಿಸ್ಮಿತನಾಗುತ್ತಾನೆ. ಇದೆ ಸಮಯದಲ್ಲಿ ಶಬರಿಯ ಆತ್ಮೀಯವಾದ ಆತಿಥ್ಯ ಸ್ವೀಕರಿಸಿದ ಶ್ರೀರಾಮ, ಆಕೆಯ ಆಸೆಯನ್ನು ಈಡೇರಿಸಲು ಮುಂದಾದಾಗ, ಶಬರಿಯು ಮುಕ್ತಿಯನ್ನು ದಯಪಾಲಿಸು ತಂದೆ ಎಂದು, ಹಾಗು ನಿನ್ನ ತೊಡೆಯ ಮೇಲೆ ನನ್ನ ಕೊನೆಯ ಉಸಿರು ಎಂದು ನಿರರ್ಗಳವಾಗಿ ತನ್ನ ಆಸೆಯನ್ನು ಬಿತ್ತರಿಸುತ್ತಾಳೆ.

ಆ ಸಮಯದಲ್ಲಿ ಶ್ರೀರಾಮ ಅದಕ್ಕೆ ಒಪ್ಪಿಗೆ ಸೂಚಿಸಿ, ಗಂಗಾ ಜಲಕ್ಕಾಗಿ ಹುಡುಕುತ್ತಿರುವಾಗ ತನ್ನ ದಿವ್ಯ ಶಕ್ತಿಗಳಿಂದ ಬಾಣ ಪ್ರಯೋಗಿಸಿ, ಗಂಗಾ ನೀರನ್ನು ಉದ್ಬವಿಸುತ್ತಾನೆ. ಶಬರಿಗೆ ಮುಕ್ತಿ ನೀಡುವ ಮುಕಾಂತರ ಅವಳ ಅಭಿಲಾಷೆ ಮತ್ತು ಆದ್ಯಾತ್ಮಿಕ ಗುರಿಯನ್ನು ಪೂರೈಸಿದನು. ಆದ್ದರಿಂದ ಇಲ್ಲಿಯ ಜನರು ಕಾಶಿಗೂ ಹಾಗು ಶಬರಿ ವನಕ್ಕೂ ಸಂಬಂಧವಿದೆಯಂದು, ಹಾಗು ಇದನ್ನು ದಕ್ಷಿಣ ಗಂಗೆ ಎಂದು ಕರೆಯುತ್ತಾರೆ. ಎಂಬುದು ಇಲ್ಲಿನ ಐತಿಹ್ಯವಾಗಿದೆ.

ಸುರೇಬಾನದ ಶಬರಿಕೊಳ್ಳ – ಒಂದು ಪವಾಸಿತಾಣ

ಶಬರಿ ಕೊಳ್ಳ ಸುರೇಬಾನ - Shabari Kolla sureban

ವಿಶಾಲವಾದ ಹಸಿರು ಹೊದಿಕೆಯಿಂದ ಕೂಡಿದ  ಬೆಟ್ಟ ಗುಡ್ಡಗಳ ನಡುವೆ ಪ್ರಸಿದ್ಧ ಜಕಣಾಚಾರಿಯ ಕೈಚಳಕದಿಂದ, ಮೂಡಿಬಂದಿರುವ ನಯನಮನೋಹರ ಮುಖಮಂಟಪವಿದೆ. ಗರ್ಭಗುಡಿಯ ಮುಂದಿರುವ ಮಂಟಪದಲ್ಲಿ ಮದುವೆ ಹಾಗೂ ಇನ್ನಿತರ ಶುಭಕಾರ್ಯಗಳನ್ನು ಮಾಡಿಸುತ್ತಾರೆ. ತಾಯಿಯ ವಿಗ್ರಹವು ಐದು ಅಡಿ ಎತ್ತರವಿದ್ದು, ಕಣ್ಮನ ಸೆಳೆಯುತ್ತದೆ.

ಗುಡಿಯ ಮುಂದೆ  ಒಂದು ದೀಪಮಾಲೆಯಿದೆ. ಇಲ್ಲಿ, ಪ್ರತಿ ಕಾರ್ತಿಕ ಮಾಸದಂದು ದೀಪೋತ್ಸವ ಕಾರ್ಯಕ್ರಮ ವಿಜೃಂಬಣೆಯಿಂದ ಮಾಡುತ್ತಾರೆ. ದೇವಸ್ಥಾನದ ಬಲಭಾಗದಲ್ಲಿ ಎರಡು ದೊಡ್ಡ ಹೊಂಡಗಳಿದ್ದು, ಹಾಗು ಚಿಕ್ಕದಾದ ಒಂದು ಪುಷ್ಕರಣಿ ಇದೆ. ಈ ಪುಷ್ಕರಣಿಯು, ಬರಗಾಲದ ಬಿರು ಬೇಸಿಗೆಯಲ್ಲೂ ಸದಾ ಖಾಲಿಯಾಗದ ನೀರಿನ ಅಕ್ಷಯಪಾತ್ರೆಯಾಗಿದೆ. ಈ ನೀರಿನ ಕೊಳದಲ್ಲಿ ವಿನಾಯಕನ(ಗಣೇಶ) ಪ್ರತಿಮೆ ಇರುವುದು ವಿಶೇಷ.

ಹಾಗೆಯೇ ಆ ಹೊಂಡಗಳನ್ನು ದಾಟಿ ಮುಂದಕ್ಕೆ ಹೋದರೆ ಎರಡುನೂರು ಅಡಿ ಎತ್ತರದಿಂದ ಧುಮುಕುವ ಒಂದು ಸಣ್ಣ ಜಲಪಾತವಿದೆ. ಇದನ್ನು ಮಳೆಗಾಲದಲ್ಲಿ ನೋಡಲು ಅದ್ಭುತವಾಗಿರುತ್ತದೆ. ಹೋಗುವ ದಾರಿಯಲ್ಲಿ, ಬೆಟ್ಟ ಗುಡ್ಡದ ಮೇಲೆ ಒಂದು ವಿಸ್ಮಯಕಾರಿ ಸ್ಥಳವಿದೆ. ಅದನ್ನು ಆಕಳಮೊಲೆ ಎನ್ನುತ್ತಾರೆ.

ಶಬರಿ ಕೊಳ್ಳ ಸುರೇಬಾನ - Shabari Kolla sureban

ಒಂದು ಕಲ್ಲಿನಲ್ಲಿ ಮೊಲೆಯಾಕಾರವಿದ್ದು, ಅದರಿಂದ ಹಾಲು ಬರುತ್ತಿತ್ತು ಎನ್ನುವ ಪ್ರತೀತಿ ಇದೆ. ಇನ್ನೊಂದು ವಿಶೇಷವೇನೆಂದರೆ, ಇಲ್ಲಿರುವ ಎರಡು ಹೊಂಡದಲ್ಲಿ ಒಂದು ಹೊಂಡಕ್ಕೆ ಅಗಸ್ತ್ಯ ಮುನಿಯಿಂದ ಶಾಪವಿದೆ ಎಂಬುದು ಸ್ಥಳಪುರಾಣ. ಇಲ್ಲಿ ಒಂದು ಮಳೆರಾಜನ ಮಂದಿರವು ಕೂಡ ಇದೆ. ಗುಡ್ಡದ ಮೇಲೆ ಎರಡು ಪುಟ್ಟದಾದ ಕೊಳಗಳಿದ್ದು, ಮಳೆಗಾಲದಲ್ಲಿ ಇದರ ಸೊಬಗು ನೋಡಲು ಕಣ್ಮನ ಸೆಳೆಯುತ್ತದೆ.

ಇಲ್ಲಿನ ಜನರು ಆಗಾಗ ಶಬರಿಯ ದರ್ಶನ ಪಡೆಯಲು ಬರುತ್ತಾರೆ. ಹಾಗೆಯೆ, ಕೊಳದಲ್ಲಿ ಮಿಂದೆದ್ದು, ದೇವಿಯ ದರ್ಶನ ಪಡೆದು, ಬುತ್ತಿಯೂಟ ಸವೆದು, ಕುಟುಂಬದೊಂದಿದೆ ಸಂತೋಷದಿಂದ ಕಾಲಕಳೆಯುತ್ತಾರೆ. ಹಾಗು, ಇಲ್ಲಿ ಅನ್ನಪ್ರಸಾದದ ವ್ಯವಸ್ಥೆಯು ಸಹ ಇರುತ್ತದೆ. ಪ್ರತಿ ವರ್ಷ ಭಾರತ್ ಹುಣ್ಣಿಮೆಯ ಮೂರನೆಯ ತದಗಿ ಮಿತಿಯಂದು, ಜಾತ್ರಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ಜರುಗುತ್ತದೆ.

ಶಬರಿ ಕೊಳ್ಳ ಸುರೇಬಾನ - Shabari Kolla sureban

ಈ ಶಬರಿ ಕೊಳ್ಳ ಬೆಂಗಳೂರಿನಿಂದ 460 ಕಿಲೋಮೀಟರು, ಮೈಸೂರಿನಿಂದ 522 ಕಿಲೋಮೀಟರ್, ಬೆಳಗಾವಿ ಇಂದ 112 ಕಿಲೋಮೀಟರು, ಹಾಗೂ ರಾಮದುರ್ಗ ತಾಲೂಕಿನಿಂದ 12 ಕಿಲೋಮೀಟರು ಅಂತರದಲ್ಲಿದೆ. ಈ ಶಬರಿ ವನವು, ಹಾಗೂ ಇಲ್ಲಿನ ಪುರಾವೆ, ಐತಿಹ್ಯಗಳು, ರಾಮಾಯಣವನ್ನು ನೆನಪಿಸುತ್ತವೆ.

Share it:

This article is submitted by one of our guest author. We thank you for your great explaination on the topic. Wish you all the best and keep writing.

Leave a Comment