ಚಾರಣಿಗರ ಪ್ರಿಯವಾದ ಸ್ಥಳ, ಹಾಗೂ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಐತಿಹಾಸಿಕ ಪ್ರವಾಸಿ ತಾಣವಾಗಿರುವಂತಹ ಯಾಣ ವನ್ನು ಸುತ್ತೋಣ.
ಕುಮುಟಾ ತಾಲೂಕಿನಲ್ಲಿರುವ ಸಣ್ಣಗ್ರಾಮ ಯಾಣ. ಇದು ಕಾರವಾರದಿಂದ ಪೂರ್ವ ಕ್ಕೆ 62 ಕಿ. ಮೀ ದೂರದಲ್ಲಿದೆ. ನಿತ್ಯ ಹರಿದ್ವರ್ಣ ದ ಕಾಡುಗಳ ಒಳಗೆ ಆಳವಾಗಿ ಹಾಗೂ ಚೂಪಾದ ಬಂಡೆಗಳಿಂದ ಹೊಂದಿಕೊಂಡಿದೆ. ಮೂರು ಚದರ ಕಿಲೋ ಮೀಟರ್ನಷ್ಟು ಹರಡಿರುವ ಯಾಣ ಬೆಟ್ಟಗಳು, ಐತಿಹಾಸಿಕ ಮತ್ತು ಧರ್ಮದ ಕೇಂದ್ರವಾಗಿದೆ. ಮತ್ತು ಇದು ಪಂಚಾಯತ್ ಅಡಿಯಲ್ಲಿ ಬರುತ್ತದೆ.
ಆಶ್ಚರ್ಯ ವೆಂದರೆ ಇಲ್ಲಿ ಚಾರಣಿಗರು ಬರಲು ಬಹಳ ಇಷ್ಟಪಡುತ್ತಾರೆ. ಕಾರಣ ಇಲ್ಲಿನ ಸೌಂದರ್ಯ ಅಷ್ಟು ಆಕರ್ಷಣೀಯವಾಗಿದೆ. ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಈ ಮಾರ್ಗ ಪ್ರಕೃತಿ ಪ್ರೇಮಿಗಳಿಗೆ ಬಹುಪ್ರಿಯವಾದ ಜಾಗವಾಗಿದೆ.
ಭೈರವೇ ಶ್ವರ ಶಿಖರ ಮತ್ತು ಮೋಹಿನಿ ಶಿಖರಗಳು
ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಅಡಗಿರುವ ಈ ಅದ್ಭುತ ಬೆಟ್ಟ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿರುವ ಶಿಲಾ ರಚನೆಯೇ ಅಂತಹದು. ಇಲ್ಲಿ ಕಾಣಸಿಗುವ “ಭೈರವೇಶ್ವರ ಶಿಖರ” ಮತ್ತು “ಮೋಹಿನಿ ಶಿಖರಗಳು” ಆಕರ್ಷಣೆಯ ಕೇದ್ರಬಿಂದುವಾಗಿದೆ.
ಭೈರವೇ ಶ್ವರ ಶಿಖರವು ೧೨೦ ಮೀ ಟರ್ ಮತ್ತುಅದರ ಬುಡದಿಂದ ಮೋಹಿನಿ ಶಿಖರವು ೯೦ ಮೀಟರ್ ಅಂತರದಲ್ಲಿದೆ. ಕಪ್ಪುವರ್ಣಿತದಲ್ಲಿ ಕಂಡುಬರುವ ಈ ಎರೆಡು ಶಿಖರಗಳು ಸುಣ್ಣದ ಕಲ್ಲುಗಳ ಸಂಯೋಜನೆಯಾಗಿದೆ.
ಪವಿತ್ರ ಹಾಗೂ ಪುರಾಣಿಕ ಸಂಬಂಧ ಹೊಂದಿರುವ ಭೈರವೇಶ್ವರ ಶಿಖರದಲ್ಲಿ ಶಿವನ ದೇವಾಲಯವಿದೆ. ಶಿವನಿಗೆ ಅರ್ಪಿತವಾದಂತಹ ಗುಹೆ, ಇದು ಭೈರವೆಶ್ವರ ಶಿಖರದ ಕೆಳಗೆ ಕಂಡುಬರುತ್ತದೆ. ಪ್ರಕ್ಷೇಪಿಸುವ ಕಲ್ಲುಬಂಡೆಗಳಿಂದ ಹರಿಯುವ ನೀರನ್ನು ಅಲ್ಲಿನ ಜನರು “ಗಂಗೋದ್ಭವ” ಎಂದು ಕರೆಯುವರು. ಅದೇ ರೀತಿ ಪಾರ್ವತೀ ದೇವಿಯು ಮೋಹಿನಿ ಶಿಖರದ ಕೆಳಗೆ ಪೂಜಿಸಲ್ಪಡುತ್ತಾಳೆ.
ಭಸ್ಮಾಸುರನು ಭಸ್ಮವಾದ ಸ್ಥಳ
ಇಲ್ಲಿನ ಇತಿಹಾಸ ಮತ್ತು ಪುರಾಣ, ಭಸ್ಮಾಸುರನು ತನ್ನ ಕೆಟ್ಟ ಯೋಚನೆ ಮತ್ತು ಮೂರ್ಖ ತನದಿಂದ ಭಸ್ಮವಾದ ಕಥೆಯನ್ನು ಹೇಳುತ್ತದೆ.
ಭಸ್ಮಾಸುರನು ನಡೆಸಿದ ಘೋರ ತಪಸ್ಸಿನ ಫಲವಾಗಿ ಶಿವ ಪರಮಾತ್ಮನ ಆಶೀರ್ವಾದದಿಂದ ವರವನ್ನು ಗಳಿಸಿದ. ಮತ್ತು ಬಹಳ ಅಹಂನಿಂದ ಮೆರೆಯುತ್ತಿರುತ್ತಾನೆ.ಸ್ವತಃ ಆ ವರವನ್ನು ಶಿವನ ಮೇಲೆ ಪ್ರಯೋಗಿಸಲು ಮುಂದಾಗುತ್ತಾನೆ. ಈ ಸನ್ನಿವೇಶದ ಮುಂದಾಲೋಚನೆಯನ್ನು ಅರಿತಿದ್ದ ಭಗವಾನ್ ವಿಷ್ಣು ಒಬ್ಬ ಮೋಹಕ ಚೆಲುವೆಯ ರೂಪದಲ್ಲಿ ಬಂದು ಭಸ್ಮಾ ಸುರನನ್ನು ಮೋಸದಿಂದ ನೃತ್ಯ ರೂಪಕದ ಮೂಲಕ ಭಸ್ಮಾಸುರನ ವಧೆ ಮಾಡಲಾಗಿತ್ತು, ಎನ್ನುವುದು ರೋಚಕ ಸಂಗತಿ.
ಅವನು ಬೆಂಕಿಯಲ್ಲಿ ಭಸ್ಮವಾಗುವ ಸಮಯದಲ್ಲಿ ಹೊರಬಂದ ಉಷ್ಣದಿಂದಾಗಿ ಕಲ್ಲುಗಳು ಕಪ್ಪು ಬಣ್ಣಕ್ಕೆ ತಿರುಗಿದವು ಎಂದು ಹೇಳಲಾಗುತ್ತದೆ.
ಶಿವರಾತ್ರಿಯ ವೈ ಭವ
ಇಲ್ಲಿಯ ಶಿವರಾತ್ರಿಯ ವೈಭವ ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಹರಿದು ಬರುತ್ತದೆ. ಶಿವರಾತ್ರಿಯ ಸಮಯದಲ್ಲಿ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಉತ್ಸವ ನಯನ ಮನೋ ಹರವಾಗಿರುತ್ತದೆ. ಶಿವರಾತ್ರಿಯ ವೇಳೆ ಲಿಂಗದ ಮೇಲೆ ಜಿನುಗುವ ನೀರನ್ನು ಗೋಕರ್ಣದ ಮಹಾಬಲೇಶ್ವರನ ಸನ್ನಿದಿಯಲ್ಲಿ ಅಭಿಷೇಕ ನೆರವೇರಿಸಲು ಸೇರುತ್ತದೆ.
ಶಿವರಾತ್ರಿಯ ಹತ್ತು ದಿನದ ಉತ್ಸವದಲ್ಲಿ ಯಕ್ಷಗಾನ, ಸಂಗೀತ, ನೃತ್ಯ, ಹೀಗೆ ಕಲಾ ಪ್ರದರ್ಶನ ನಡೆಯುತ್ತಿರುತ್ತದೆ. ಆದಕಾರಣ ಗೋಕರ್ಣದ ಜನರು ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ.
ರೊಕ್ಕಿದ್ದರೆ ಗೋಕರ್ಣ, ಸೊಕ್ಕಿದ್ದರೆ ಯಾಣ ಎಂಬ ನಾಣ್ಣುಡಿ ಇದೆ. ಏಕೆಂದರೆ ಯಾಣದ ದಾರಿಯು ಆಗಿನ ಕಾಲದಲ್ಲಿ ಅಷ್ಟು ಕಷ್ಟಕರ ದಾರಿಯಾಗಿತ್ತು. ಅದು ಮನುಷ್ಯನ ಸೊಕ್ಕು ಅಡಗಿಸುವಂತಹ ಶಕ್ತಿ ಹೊದಿತ್ತು. ಬೆಟ್ಟದ ಇಕ್ಕೆಲಗಳಲ್ಲಿ ಹೇರಳವಾಗಿ ಅರಳುವ ಕಾಡು ಹೂಗಳು ಬೆಟ್ಟದ ದಾರಿಯನ್ನು ಇನ್ನೂ ಕಾಂತಿಯುತವನ್ನಾಗಿಸುತ್ತದೆ.
ಇಲ್ಲಿ ಚಂಡಿಕಾದೇವಿಯ ಮೂರ್ತಿ ಕಾಣಸಿಗುತ್ತದೆ. ಇಲ್ಲಿನ ಮತ್ತೊಂದು ವಿಶೇಷವೇನೆಂದರೆ ಲಿಂಗದ ಮೇಲೆ ಸುರಿಯುವ ನೀರು. ಈ ನೀರೇ ಚಂಡಿ ಹೊಳೆಯಾಗಿ ಸಾಗುತ್ತ ಅಘನಾಶಿನಿ ನದಿಯನ್ನು ಸೇರುತ್ತದೆ. ಪ್ರಸಿದ್ಧ”ನಮ್ಮೂರ ಮಂದಾರ ಹೂವೇ ” ಚಿತ್ರದ ಚಿತ್ರೀಕರಣವನ್ನು ಇಲ್ಲೇ ಚಿತ್ರೀಕರಿಸಲಾಗಿದೆ. ಶಕ್ತಿ ಇದ್ದಾಗಲೇ ಒಮ್ಮೆ ಯಾಣದ ಪಯಣ ಮಾಡಬೇಕೆಂಬುದು ಹಿರಿಯರ ಮಾತು.
ಯಾಣಕ್ಕೆ ಹೋ ಗುವ ದಾರಿ……
ಬೆಂಗಳೂರಿನಿಂದ ಯಾಣ ಸುಮಾರು 436 ಕಿ.ಮೀ. ಮತ್ತು ಕರಾವಳಿ ಪಟ್ಟಣವಾದ ಕುಮುಟಾದಿಂದ 25 ಕಿ.ಮೀ.
ಹಾಗೂ ಶಿರಸಿಯಿಂದ 40 ಕಿ. ಮೀ. ದೂರದಲ್ಲಿದೆ. ಅಕ್ಟೋಬರ್ ನಿಂದ ಫೆಬ್ರುವರಿ ವರೆಗಿನ ಕಾಲವು ಅತ್ಯಂತ ಸೂಕ್ತಸಮಯವಾಗಿದೆ.